
9th July 2025
ಬೈಲಹೊಂಗಲ: ಸರಕಾರಿ ಶಾಲೆಗಳಿಗೆ ಮತ್ತು ಅನುದಾನಿತ ಶಾಲೆಗಳಿಗೆ, ಕಾಲೇಜುಗಳಿಗೆ ಒಟ್ಟು 20 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಲು ಕ್ರಮ ಕೈಕೊಳ್ಳಲಾಗುವುದು. ಒಳಮೀಸಲಾತಿ ವರದಿ ಬಂದ ತಕ್ಷಣ, ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ನೂತನ ಕೊಠಡಿಗಳ ಉದ್ಘಾಟನೆ ಮತ್ತು 2025-26ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿರುವ ಶಾಸಕ ಮಹಾಂತೇಶ ಕೌಜಲಗಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸರಕಾರಿ ಕಾಲೇಜಿನ ಅಭಿವೃದ್ಧಿಗೆ ಸಹಾಯ-ಸಹಕಾರ ನೀಡುವುದಾಗಿ ಸಚಿವರು ಹೇಳಿದರು. ಎಲ್ಕೆಜಿಯಿಂದ ಹಿಡಿದು ದ್ವಿತೀಯ ಪಿಯುಸಿ ವರೆಗೆ ನನ್ನ ವ್ಯಾಪ್ತಿ ಬರುತ್ತದೆ. ನನ್ನ ಮೇಲೆ ವಿಶ್ವಾಸ ಇಟ್ಟು ಸಿಎಂ, ಡಿಸಿಎಂ ಅವರು ನನಗೆ ಮಹತ್ವದ ಇಲಾಖೆ ಕೊಟ್ಟಿದ್ದಾರೆ. ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೆ, ದೇವಸ್ಥಾನಗಳ ಅಭಿವೃದ್ಧಿಗೆ ನಾನು ದೇಣಿಗೆ, ಅನುದಾನ ಕೊಡುವುದು ಕಡಿಮೆ. ಶಿಕ್ಷಣಕ್ಕೆ ಶಾಲಾ-ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಅನುದಾನ ಹೆಚ್ಚು ಕೊಡುತ್ತೇನೆ ಎಂದರು.
46 ಸಾವಿರ ಶಾಲೆಗಳ ಪೈಕಿ, 57 ಲಕ್ಷ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಡಲಾಗುತ್ತಿದೆ. ಮಕ್ಕಳಲ್ಲಿ ಪೌಷ್ಠಿಕತೆ ಮುಖ್ಯ, ಆರೋಗ್ಯ ಚನ್ನಾಗಿದ್ದರೆ, ವಿದ್ಯೆ ತಲೆಗೆ ಹತ್ತುತ್ತದೆ ಎಂದರು. ಖಾಸಗಿ ಕಂಪನಿಯವರು, 57 ಲಕ್ಷ ಶಾಲಾ ಮಕ್ಕಳಿಗೆ 1591 ಕೋಟಿ ರೂ.ನೀಡಿದ್ದಾರೆಂದು ಸ್ಮರಿಸಿದರು. ನಿಟ್, ಸಿಇಟಿ, ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಬಡ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ 25 ಸಾವಿರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡುತ್ತಿದೆ. ಇದು ದೇಶದಲ್ಲೆ ಇತಿಹಾಸವಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲು ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು. ಕೋಚಿಂಗ್ ಕಲಿಯಲು ಕೆಲ ಕಡೆ ಲಕ್ಷಾಂತರ ರೂ.ಖರ್ಚು ಮಾಡಬೇಕಾಗಿದೆ. ಬಡವರಿಗೆ ಅನುಕೂಲ ಮಾಡಲಾಗುವುದು ಎಂದರು. ಮಕ್ಕಳ ಕಲಿಕೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು. ಬಡ ಮಕ್ಕಳ ಏಳ್ಗೆಗೆ ರಾಜ್ಯ ಸರಕಾರ ಹಗಲಿರುಳು ಶ್ರಮಪಡುತ್ತಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಬೈಲಹೊಂಗಲ ಸರಕಾರಿ ಪದವಿ ಪೂರ್ವ ಕಾಲೇಜು ಮಾದರಿಯಾಗಿದೆ ಎಂದರು.
ಸಾಧಕ ವಿದ್ಯಾರ್ಥಿಗಳನ್ನು, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದ್ದು ಸಂತಸ ತಂದಿದೆ ಎಂದರು.
ಈ ಕಾಲೇಜಿನ ವಿದ್ಯಾರ್ಥಿನಿಯರು ಪ್ರಸ್ತುತ ಕಾರ್ಯಕ್ರಮದ ನಿರೂಪಣೆ ಚನ್ನಾಗಿ ಮಾಡಿದ್ದು ಶ್ಲಾಘನೀಯವಾಗಿದೆ. ಇದು ನಾಯಕತ್ವ ಗುಣ ಬೆಳೆಯಲು ಸಹಕಾರಿಯಾಗಲಿದೆ ಎಂದರು.
----
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಬೈಲಹೊಂಗಲ ಭಾಗಕ್ಕೆ ಬಂದಿದ್ದು, ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಲೀಲಾವತಿ ಹಿರೇಮಠ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಧಾರವಾಡದ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ, ತಾ.ಪಂ.ಇಒ ಸಂಜೀವ ಜುನ್ನೂರ, ಬಿಇಒ ಎ.ಎನ್.ಪ್ಯಾಟಿ, ಉದ್ಯಮಿ ರಾಜಶೇಖರ ಮೆಟಗುಡ್ಡ, ಪ್ರಾಚಾರ್ಯ ಎನ್.ಎಂ.ಕುದರಿಮೋತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ ವಾಲಿ, ಸದಸ್ಯರಾದ ಈರಣ್ಣಾ ಬೆಟಗೇರಿ, ವೀರಣ್ಣಾ ಜವಳಿ, ಗಿರೀಶ ಗಡತರನವರ, ಆರ್.ಕೆ.ಪಾಟೀಲ, ಜಯಶ್ರೀ ಜೊಂಜಾಳೆ, ಪ್ರಕಾಶ ಬಡ್ಲಿ, ಶ್ರೀಶೈಲ ಮೊರಬದ, ಚಂದ್ರಶೇಖರ ಹೊಸೂರ, ಮಲ್ಲೇಶ ಹೊಸಮನಿ, ಅಂಬಿಕಾ ಕೋಟಬಾಗಿ ಉಪಸ್ಥಿತರಿದ್ದರು. ಉಪನ್ಯಾಸಕ ಬಿ.ಎಂ.ಕೊಳವಿ ಪ್ರಾಸ್ತಾವಿಸಿದರು. ಸಬೀಯಾ ಯಕ್ಕುಂಡಿ ಸ್ವಾಗತಿಸಿದರು. ಪ್ರೀಯಾ ಹಿರೇಮಠ ಹಾಗೂ ಕಾವೇರಿ ಭಜಂತ್ರಿ ನಿರೂಪಿಸಿದರು. ಇದೇ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಂಜುನಾಥ ಹತ್ತಿ ಈತ ಸ್ವತಃ, ಶಿಕ್ಷಣ ಸಚಿವರ ಭಾವಚಿತ್ರವನ್ನು ಕೈಬರಹದಲ್ಲಿ ಮೂಡಿಸಿದ ಭಾವಚಿತ್ರವನ್ನು ನೀಡಿ, ಎಲ್ಲರ ಗಮನ ಸೆಳೆದನು.
ಪೋಟೊ- ಬೈಲಹೊಂಗಲಶಾ ಶಾಲೆಯೊಂದರಲ್ಲಿ
ಸಚಿವ ಮಧು ಬಂಗಾರೆಪ್ಪ ಮಕ್ಕಳೊಂದಿಗೆ ಊಟ ಮಾಡಿದರು.